ಎನ್ ಡಿಎ ಒಕ್ಕೂಟಕ್ಕೆ 10 ಜನ ಪಕ್ಷೇತರರ ಬೆಂಬಲ!

In ರಾಜಕೀಯ
June 07, 2024

ಹೊಸದಿಲ್ಲಿ: ಬಿಜೆಪಿಯು ಜೆಡಿಯು ಹಾಗೂ ಟಿಡಿಪಿ ಸಹಾಯದೊಂದಿಗೆ ಅಧಿಕಾರ ರಚಿಸಲು ಮುಂದಾಗಿದೆ. ಇದರ ಮಧ್ಯೆ ಸಣ್ಣ ಪಕ್ಷಗಳ ಹಾಗೂ ಪಕ್ಷೇತರವಾಗಿ ಗೆದ್ದ 10 ಸಂಸದರು ಎನ್‌ ಡಿಎಗೆ ಬೆಂಬಲ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಪರಿಣಾಮವಾಗಿ ಎನ್ ಡಿಎ ಮೈತ್ರಿಯ ಬಲ 303ಕ್ಕೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಬೆಂಬಲ ನೀಡಿದ 10 ಜನ ಸಂಸದರ ಹೆಸರು ಬಹಿರಂಗವಾಗಿಲ್ಲ. ಸಿಕ್ಕಿಂ ಕ್ರಾಂತಿ ಮೋರ್ಚಾ, ಶಿರೋಮಣಿ ಅಕಾಲಿ ದಳ, ವೈಸ್ ಆಫ್‌ ಪೀಪಲ್ಸ್‌ ಪಾರ್ಟಿ, ಮಿಜೋರಾಂನ ಜೆಡ್‌ಪಿಎಂನ ತಲಾ ಒಬ್ಬ ಸಂಸದರ ಬೆಂಬಲ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಇನ್ನುಳಿದವರ ಹೆಸರು ಬಹಿರಂಗವಾಗಬೇಕಿದೆ.

ಈ ಬೆಂಬಲ ಸಿಕ್ಕಿದ್ದರಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಜೆಡಿಯು ಹಾಗೂ ಟಿಡಿಪಿಯನ್ನು ಸೆಳೆದು ಎನ್ ಡಿಎ ಒಕ್ಕೂಟದ ನಿರ್ಧಾರಕ್ಕೆ ವ್ಯಕ್ತಪಡಿಸಬೇಕೆಂಬ ಇಂಡಿಯಾ ಒಕ್ಕೂಟದ ಪ್ರಯತ್ನ ಕೂಡ ಮತ್ತಷ್ಟು ಕಠಿಣವಾಗುವಂತಾಗಿದೆ. ನೂತನವಾಗಿ ಆಯ್ಕೆಯಾಗಿರುವ ಇನ್ನುಳಿದ 7 ಜನರ ಬೆಂಬಲ ಮೋದಿಗೆ ಸಿಗುವುದು ಕಷ್ಟ.

7 ಜನ ಪಕ್ಷೇತರ ಸಂಸದರಲ್ಲಿ ಇಬ್ಬರು ಖಲಿಸ್ತಾನಿ ಬೆಂಬಲಿಗರಿದ್ದಾರೆ. ಅಮೃತ್‌ಪಾಲ್‌ ಸಿಂಗ್‌, ಸರಬ್‌ಜಿತ್‌ ಸಿಂಗ್‌ ಖಲ್ಸಾ ವಿವಿಧ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಇಬ್ಬರ ಬೆಂಬಲ ಮೋದಿಗೆ ಸಿಗುವುದು ಬಹುತೇಕ ಕಷ್ಟ. ದೇಶದ್ರೋಹದ ಆರೋಪದ ಮೇಲೆ ಎಂಜಿನಿಯರ್‌ ರಶೀದ್‌ ಜೈಲಲ್ಲಿದ್ದಾನೆ. ಆತ ಬೆಂಬಲಿಸುವುದಿಲ್ಲ. ಬಿಹಾರದ ರಂಜನ್‌ ರಾಜೇಶ್‌ ಅಲಿಯಾಸ್‌ ಪಪ್ಪು ಯಾದವ್‌ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿ. ಅವರ ಬೆಂಬಲವೂ ಬಿಜೆಪಿಗೆ ಕಷ್ಟ. ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಲಡಾಕ್‌ನಿಂದ ಆಯ್ಕೆಯಾಗಿರುವ ಮೊಹಮ್ಮದ್‌ ಹನೀಫ್‌, ಉತ್ತರ ಪ್ರದೇಶದಿಂದ ಗೆದ್ದಿರುವ ಚಂದ್ರಶೇಖರ್‌ ಆಜಾದ್‌, ಮಹಾರಾಷ್ಟ್ರದ ಸಾಂಗ್ಲಿಯ ಸಂಸದ ವಿಕಾಸ್‌ ಪ್ರಕಾಶ್‌ಬಾಬು ಪಾಟೀಲ್‌, ಉಮೇಶ್‌ ಬಾಬೂಧಿಭಾಯ್‌ ಪಟೇಲ್‌ ಬಿಜೆಪಿ ಬೆಂಬಲಿಸುವ ಸಾಧ್ಯತೆ ಕಡಿಮೆ.

ಒಟ್ಟಿನಲ್ಲಿ, ಸದ್ಯ ಸಿಕ್ಕಿದೆ ಎನ್ನಲಾಗುತ್ತಿರುವ ಹನ್ನೊಂದು ಪಕ್ಷೇತರ ಸಂಸದರ ಬೆಂಬಲದಿಂದಾಗಿ, ಬಿಜೆಪಿಗೆ ಜೆಡಿಯು ಹಾಗೂ ಟಿಡಿಪಿಯ ತಲೆನೋವು ಕೊಂಚ ಕಡಿಮೆ ಆದಂತೆ ಕಾಣುತ್ತಿದೆ.

ಈ ಸುದ್ದಿ ಹಂಚಿಕೊಳ್ಳಿ