103 views 0 secs 0 comments

ರೀಲ್ಸ್ ಹುಚ್ಚಿಗೆ ಆಳವಾದ ಕಣಿವೆಗೆ ಬಿದ್ದು ಯುವತಿ ಸಾವು

In ಅಪರಾಧ, ದೇಶ
July 18, 2024

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಯುವತಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ರಾಯಗಡದಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿ ಅನ್ವಿ ಕಾಮ್ದಾರ್ (26) ಎಂದು ಗುರುತಿಸಲಾಗಿದೆ. ಈ ಯುವತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ರಾಯಗಡ ಬಳಿಯ ಕುಂಭೆ ಫಾಲ್ಸ್‌ ಬಳಿ ರೀಲ್ ಮಾಡುತ್ತಿರುವ ವೇಳೆ ಏಕಾಏಕಿ ಭೂಕುಸಿದಿದ್ದು, ಯುವತಿ 300 ಅಡಿ ಆಳದ ಜಲಪಾತಕ್ಕೆ ಬಿದ್ದಿದ್ದಾಳೆ. ಅನ್ವಿ ಕಾಮ್ದಾರ್ ಜುಲೈ 16 ರಂದು ತನ್ನ ಏಳು ಸ್ನೇಹಿತರೊಂದಿಗೆ ಜಲಪಾತಕ್ಕೆ ರೀಲ್ ಚಿತ್ರೀಕರಣಕ್ಕೆ ತೆರಳಿದ್ದರು. ಆ ವೇಳೆ ಈ ಘಟನೆ ನಡೆದಿದೆ.

ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯುವತಿ ಸುಮಾರು 300-350 ಅಡಿ ಕಣಿವೆಯಲ್ಲಿ ಬಿದ್ದಿದ್ದಾಳೆ. ಜೋರು ಮಳೆ ಸುರಿಯುತ್ತಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಮೇಲೆತ್ತುವುದು ಸಾಧ್ಯವಾಗಲಿಲ್ಲ. ಆದಾಗ್ಯೂ, ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಅನ್ವಿಯನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಮಂಗಾವ್ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪ್ರವಾಸ ನಿಷೇಧಿಸಬೇಕೆಂದು ಸದ್ಯ ಪೊಲೀಸರು ಮನವಿ ಮಾಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ