ಐಸಿಸಿ ವಿಶೇಷ ಗೌರವಕ್ಕೆ ಪಾತ್ರರಾದ ಬುಮ್ರಾ, ಮಂಧಾನ!

In ಕ್ರೀಡೆ
July 11, 2024

2024ರ ಟಿ20 ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ತೋರಿದ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬುಮ್ರಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಪ್ರದರ್ಶನಕ್ಕಾಗಿ ಐಸಿಸಿಯಿಂದ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು. ಈಗ ಬುಮ್ರಾ, ಐಸಿಸಿ ಜೂನ್ ತಿಂಗಳ ಆಟಗಾರ ಗೌರವಕ್ಕೆ ಭಾಜನರಾಗಿದ್ದಾರೆ.
ಬುಮ್ರಾ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾಗೂ ಮೊದಲು ಈ ಗೌರವವನ್ನು ಭುವನೇಶ್ವರ್ ಕುಮಾರ್ ಸ್ವೀಕರಿಸಿದ್ದರು. ಜನವರಿ 2021 ರಲ್ಲಿ ಈ ಪ್ರಶಸ್ತಿಯನ್ನು ಭುವನೇಶ್ವರ್ ಪಡೆದಿದ್ದಾರೆ. ಈಗ ಈ ಪಟ್ಟಿಯಲ್ಲಿ ಬುಮ್ರಾ ಹೆಸರು ಸೇರಿಕೊಂಡಿದೆ.

2024 ರ ಟಿ20 ವಿಶ್ವಕಪ್‌ ನಲ್ಲಿ ಜಸ್ಪ್ರೀತ್ ಬುಮ್ರಾ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿ ಆಯ್ಕೆಯಾಗಿದ್ದರು. ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಬುಮ್ರಾ ಆಡಿದ 8 ಪಂದ್ಯಗಳಲ್ಲಿ 8.27 ರ ಸರಾಸರಿಯಲ್ಲಿ 15 ವಿಕೆಟ್ ಪಡೆದು ಮಿಂಚಿದ್ದರು. 29.4 ಓವರ್‌ಗಳನ್ನು ಬೌಲ್ ಮಾಡಿ ಕೇವಲ 4.18 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಸಾಧನೆ ಮಾಡಿದ್ದಾರೆ.

ಪ್ರಶಸ್ತಿ ಗೆದ್ದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ಪ್ರೀತ್ ಬುಮ್ರಾ, ಈ ಪ್ರಶಸ್ತಿ ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನಗೆ ಅದೃಷ್ಟದ ವಿಷಯವಾಗಿದ್ದು, ಕೆಲವು ವಾರಗಳು ನನಗೆ ಬಹಳ ಸ್ಮರಣೀಯ ಎಂದು ಹೇಳಿದ್ದಾರೆ. ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಭಾರತೀಯ ತಂಡದ ಓಪನರ್ ಸ್ಮೃತಿ ಮಂಧಾನ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಂಧಾನಾಗೆ ಐಸಿಸಿ ಜೂನ್ ತಿಂಗಳ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಈ ಪ್ರಶಸ್ತಿ ಬಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಸ್ಮೃತಿ ಕ್ರಮವಾಗಿ 117, 136, 90 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದಾರೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ 149 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಟಿ20 ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಈ ಪ್ರಶಸ್ತಿ ಲಭಿಸಿದೆ.

ಈ ಸುದ್ದಿ ಹಂಚಿಕೊಳ್ಳಿ