71 views 1 sec 0 comments

ಫೋರ್ಬ್ಸ್ ಟಾಪ್ 100 ಶಕ್ತಿಶಾಲಿ: ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್

In ದೇಶ, ರಾಜಕೀಯ
December 14, 2024

ನವದೆಹಲಿ: ಫೋರ್ಬ್ಸ್ ಟಾಪ್ 100 ಶಕ್ತಿ ಶಾಲಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ 6ನೇ ಬಾರಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ನಿರ್ಮಲಾ 32ನೇ ಸ್ಥಾನದಲ್ಲಿದ್ದರು. ಈ ವರ್ಷ 4 ಸ್ಥಾನ ಮೇಲೇರಿ 28ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಭಾರತದ ಮಟ್ಟಿಗೆ ಅವರ ನಂ.1 ಪವರ್‌ಫುಲ್‌ ಮಹಿಳೆಯಾಗಿದ್ದಾರೆ.

ಫೋರ್ಬ್ಸ್‌ ಮೋಸ್ವ್‌ ಪವರ್‌ಫುಲ್‌ ವುಮೆನ್‌-2024′ ಪಟ್ಟಿಯಲ್ಲಿ ವಿಶ್ವದ 100 ಮಂದಿ ಮಹಿಳೆಯರನ್ನು ಅತ್ಯಂತ ಪ್ರಭಾವಿ ಮಹಿಳೆಯರನ್ನಾಗಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರಲ್ಲದೆ ಎಚ್‌ಸಿಎಲ್‌ ಕಾರ್ಪೊರೇಷನ್‌ನ ಸಿಇಒ ರೋಷನಿ ನಾಡಾರ್‌ ಮಲ್ಹೋತ್ರಾ ಮತ್ತು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಮ್ದಾರ್‌ ಷಾ ಕೂಡ ಸ್ಥಾನ ಪಡೆದಿದ್ದಾರೆ. ನಿರ್ಮಲಾ ಸೀತಾರಾಮನ್‌ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದ ಸುಮಾರು 4 ಟ್ರಿಲಿಯನ್‌ ಡಾಲರ್‌ (4 ಲಕ್ಷ ಕೋಟಿ ರೂ.) ಆರ್ಥಿಕತೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ. ಸಹಜವಾಗಿ ಅವರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿದ್ದಾರೆ.

ಎಚ್‌ಸಿಎಲ್‌ ಕಾರ್ಪೊರೇಷನ್‌ನ ಸಿಇಒ ರೋಷನಿ ನಾಡಾರ್‌ ಮಲ್ಹೋತ್ರಾ ಪಟ್ಟಿಯಲ್ಲಿ 81ನೇ ಸ್ಥಾನದಲ್ಲಿದ್ದಾರೆ. ನಾಡಾರ್‌ ಸ್ಥಾಪಿಸಿದ ಸುಮಾರು 5.33 ಲಕ್ಷ ಕೋಟಿ ರೂ. ಉದ್ಯಮದ ವ್ಯವಹಾರಗಳನ್ನು ರೋಷನಿ ನೋಡಿಕೊಳ್ಳುತ್ತಿದ್ಧಾರೆ.

ಬೆಂಗಳೂರಿನ ಬಯೋಕಾನ್‌ ಸಂಸ್ಥೆ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ 82ನೇ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91ನೇ ಸ್ಥಾನ ಪಡೆದಿದ್ದರು. 1978ರಲ್ಲಿ ಬಯೋಫಾರ್ಮಾಸ್ಯುಟಿಕಲ್‌ ಸಂಸ್ಥೆಯ ಮೂಲಕ ಅವರು ಬಯೋಕಾನ್‌ ಅನ್ನು ಸ್ಥಾಪಿಸಿದ್ದಾರೆ.

ಯುರೋಪಿಯನ್‌ ಕಮಿಷನ್‌ ಮುಖ್ಯಸ್ಥೆ ಉರ್ಸುಲಾ ವ್ಯಾನ್‌ ಡೆರ್‌ ಲೇಯೆನ್‌ ಮತ್ತೊಮ್ಮೆ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಮುಖ್ಯಸ್ಥೆ ಕ್ರಿಸ್ಟಿನಾ ಲಗಾರ್ಡೆ ಎರಡನೇ ಸ್ಥಾನ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಲ್‌ ಗೇಟ್ಸ್‌ ಅವರ ಮಾಜಿ ಪತ್ನಿ ಮಿಲಿಂದಾ ಫ್ರೆಂಚ್‌ ಗೇಟ್ಸ್‌ 8ನೇ ಸ್ಥಾನದಲ್ಲಿದ್ದಾರೆ. ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೋಸ್‌ ಅವರ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ 9 ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ