ಹೈದರಾಬಾದ್ ಮಣಿಸಿ ಫೈನಲ್ ತಲುಪಿದ ಕೋಲ್ಕತ್ತಾ

In ಕ್ರೀಡೆ
May 21, 2024

ಅಹಮದಾಬಾದ್‌: ಹೈದರಾಬಾದ್ ಮಣಿಸಿ ಕೋಲ್ಕತ್ತಾ ತಂಡ ಫೈನಲ್ ಪ್ರವೇಶಿಸಿದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಗೆಲ್ಲಲು 160 ರನ್‌ ಗಳ ಗುರಿ ನೀಡಿತ್ತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ್ದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿ ಸುಲಭವಾಗಿ ಫೈನಲ್ ಪ್ರವೇಶಿಸಿತು.ಕೋಲ್ಕತ್ತಾ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಟ್ರೋಫಿ ಗೆದ್ದಿತ್ತು.

ಕೋಲ್ಕತ್ತಾ ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿತ್ತು. ಮೊದಲ ವಿಕೆಟಿಗೆ 20 ಎಸೆತಗಳಲ್ಲಿ 44 ರನ್‌ ಬಂದಿತ್ತು. ರಹಮಾನುಲ್ಲಾ ಗುರ್ಬಾಜ್ 23 ರನ್‌ (14 ಎಸೆತ, 2 ಬೌಂಡರಿ, 2 ಸಿಕ್ಸರ್)‌, ಸುನಿಲ್‌ ನರೈನ್‌ 21 ರನ್‌ (16 ಎಸೆತ, 4 ಬೌಂಡರಿ) ಹೊಡೆದರು. ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಮುರಿಯದ 3ನೇ ವಿಕೆಟಿಗೆ 44 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ 58 ರನ್‌ (24 ಎಸೆತ, 5 ಬೌಂಡರಿ, 4 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ 51 ರನ್‌(28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿದರು.

ಟಾಸ್‌ ಗೆದ್ದ ಕೋಲ್ಕತ್ತಾ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಟ್ರಾವಿಸ್‌ ಹೆಡ್‌ ಮತ್ತೊಮ್ಮೆ ಶೂನ್ಯಕ್ಕೆ ಔಟ್ ಆದರು. ಎರಡನೇ ಓವರ್‌ನಲ್ಲಿ ಸಿಕ್ಸರ್‌ ವೀರ ಅಭಿಷೇಕ್‌ ಶರ್ಮಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. 39 ರನ್‌ಗಳಿಸುವಷ್ಟರಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಔಟಾದರು. ರಾಹುಲ್‌ ತ್ರಿಪಾಠಿ ಮತ್ತು ಕ್ಲಾಸೆನ್‌ 37 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿದರು. ಕ್ಲಾಸೆನ್‌ 32, ತ್ರಿಪಾಠಿ 55, ಪ್ಯಾಟ್‌ ಕಮ್ಮಿನ್ಸ್‌ 30 ರನ್‌ ಗಳಿಸಿದರು.

ಈ ಸುದ್ದಿ ಹಂಚಿಕೊಳ್ಳಿ