ಒಲಿಂಪಿಕ್ಸ್ ನಲ್ಲಿ ಭರ್ಜರಿ ಆರಂಭ ಪಡೆದ ಭಾರತ

In ಕ್ರೀಡೆ
July 25, 2024

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಅಧಿಕೃತವಾಗಿ ಆರಂಭಕ್ಕೂ ಮುನ್ನವೇ ಭಾರತ ಉತ್ತಮ ಆರಂಭ ಪಡೆದಿದೆ. ಅರ್ಚಿರಿಯಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ.

ಆರ್ಚರಿ ರಾಂಕಿಂಗ್‌ ರೌಂಡ್‌ ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡ ಉತ್ತಮವಾಗಿ ಬಾಣ ಬಿಡುವುದರ ಮೂಲಕ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಧೀರಜ್‌, ತರುಣ್‌ ದೀಪ್‌ ಹಾಗೂ ಪ್ರವೀಣ್‌ ಇದ್ದ ಭಾರತ ಪುರುಷರ ಆರ್ಚರಿ ಟೀಮ್‌ 2013 ಅಂಕ ಪಡೆದು ಮೂರನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಅಂಕಿತಾ ಭಕತ್‌, ಭಜನ್‌ ಕೌರ್‌ ಹಾಗೂ ದೀಪಿಕಾ ಕುಮಾರಿ ಇದ್ದ ಮಹಿಳಾ ತಂಡ 1983 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನ ಪಡೆಯುವುದರ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಜುಲೈ 28ಕ್ಕೆ ಮಹಿಳಾ ತಂಡದ ಕ್ವಾರ್ಟರ್‌ಫೈನಲ್‌ ಪಂದ್ಯ ನಡೆಯಲಿದ್ದು, ಫ್ರಾನ್ಸ್‌ ಅಥವಾ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಪುರುಷರ ತಂಡದ ಕ್ವಾರ್ಟರ್‌ಫೈನಲ್‌ ಜುಲೈ 29 ರಂದು ನಡೆಯಲಿದ್ದು, ಎದುರಾಳಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಅಲ್ಲದೇ, ಧೀರಜ್‌ ಹಾಗೂ ಅಂಕಿತಾ ಭಕತ್‌ ಇದ್ದ ಮಿಶ್ರ ಟೀಮ್‌ ಪ್ರಿಕ್ವಾಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯ ಆಗಸ್ಟ್‌ 2 ರಂದು ನಡೆಯಲಿದೆ. ಇಂಡೋನೇಷ್ಯಾ ಎದುರಾಳಿಯಾಗಿದೆ.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಧೀರಜ್‌ ನಾಲ್ಕನೇ ಸ್ಥಾನ ಪಡೆದರೆ, ತರುಣ್‌ದೀಪ್‌ 14, ಹಾಗೂ ಪ್ರವೀಣ್‌ 39ನೇ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ವಿಭಾಗದ ರಾಂಕಿಂಗ್‌ ರೌಂಡ್‌ ನಲ್ಲಿ ಉತ್ತಮ ಸ್ಥಾನ ಪಡೆದಷ್ಟು ಸುಲಭದ ಎದುರಾಳಿಗಳು ಸಿಗುತ್ತಾರೆ.
ಮಹಿಳಾ ವಿಭಾಗದಲ್ಲಿ ಅಂಕಿತಾ ಭಕತ್‌ 11ನೇ ಸ್ಥಾನ ಪಡೆದರೆ, ಭಜನ್‌ ಕೌರ್‌ ಹಾಗೂ ದೀಪಿಕಾ ಕುಮಾರಿ ಕ್ರಮವಾಗಿ 22 ಹಾಗೂ 23ನೇ ಸ್ಥಾನ ಪಡೆದಿದ್ದಾರೆ. ಜುಲೈ 30 ರಂದು ನಡೆಯಲಿರುವ ಎಲಿಮಿನೇಷನ್‌ ಸುತ್ತಿನಲ್ಲಿ ಅಂಕಿತಾ ಭಕತ್‌, ಪೋಲೆಂಡ್‌ನ ವೊಯಲೆಟ್ಟಾ ಮೈಸ್‌ಜೋರ್‌ರನ್ನು, ಭಜನ್‌ ಕೌರ್‌, ಇಂಡೋನೇಷ್ಯಾದ ಸೈಫಾ ನಿರ್ಫಿಫಾ ಕಮಲ್‌ರನ್ನು ಎದುರಿಸಲಿದ್ದಾರೆ. ಜುಲೈ 31 ರಂದು ದೀಪಿಕಾ ಕುಮಾರಿ ಈಸ್ಟೋನಿಯಾದ ರೀನಾ ಪರ್ನಾಟ್‌ ರ ಸವಾಲು ಎದುರಿಸಲಿದ್ದಾರೆ. ಭಾರತ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಪದಕ ಭರವಸೆ ಮೂಡಿಸಿದೆ.

ಈ ಸುದ್ದಿ ಹಂಚಿಕೊಳ್ಳಿ