ಶಿವಣ್ಣಗೆ ಶಸ್ತ್ರ ಚಿಕಿತ್ಸೆ ಯಶಸ್ವಿ; ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಿವೇದಿತಾ ಶಿವರಾಜಕುಮಾರ್!

ನಟ ಶಿವರಾಜ್ ಕುಮಾರ್ ಇಂದು ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಲ್ಲದೇ, ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಈಗಾಗಲೇ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಣ್ಣ ಅವರ ಕಿರಿಯ ಪುತ್ರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ದೇವರ ಕೃಪೆಯಿಂದ ನನ್ನ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣರಾಗಿರುವ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯಾದಗಳು ಎಂದು ಹೇಳಿದ್ದಾರೆ.

ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಧೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ. ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲವಾಗಿವೆ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದೆಂದಿಗೂ ಆಭಾರಿಯಾಗಿರುತ್ತೇವೆ. ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ, ಧನ್ಯವಾದಗಳು’ ಎಂದು ಸಾಮಾಜಿಕ ಜಾಲತಾಣದ ಮೂಲಕ ಬರೆದುಕೊಂಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ