ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದ್ದು, ಭಾರತದ ಹಿಡಿತದಲ್ಲಿದೆ.
ನ್ಯೂಜಿಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 143 ರನ್ ಗಳ ಮುನ್ನಡೆ ಸಾಧಿಸಿದ್ದು, ಇನ್ನೊಂದು ವಿಕೆಟ್ ಉರುಳುವುದು ಬಾಕಿ ಇದೆ.
ಈ ಗುರಿ ಬೆನ್ನಟ್ಟಿ ಭಾರತ ಗೆದ್ದರೆ, ಮೂರನೇ ಟೆಸ್ಟ್ ನ್ನಾದರೂ ಭಾರತ ಗೆದ್ದಂತಾಗುತ್ತದೆ. ಈ ಸರಣಿಯಲ್ಲಿ ಸ್ಪಿನ್ ಬೌಲರ್ ಗಳ ಪ್ರಾಭಲ್ಯ ಕಂಡು ಬಂದಿದೆ. ಎರಡೂ ತಂಡಗಳ ಸ್ಪಿನ್ನರ್ಗಳು ವಿಕೆಟ್ಗಳ ಬೇಟೆ ಮುಂದುವರೆಸಿದ್ದಾರೆ. ಈ ಮೂಲಕ ಅಪರೂಪದ ದಾಖಲೆ ನಿರ್ಮಾಣವಾಗಿದೆ.
ಉಭಯ ತಂಡಗಳ ಸ್ಪಿನ್ನರ್ಗಳು ಒಟ್ಟು 24 ವಿಕೆಟ್ ಕಬಳಿಸಿದ್ದಾರೆ. ಈ ಸರಣಿಯಲ್ಲಿ ಸ್ಪಿನ್ ಬೌಲರ್ಗಳು ಒಟ್ಟು 71 ವಿಕೆಟ್ ಗಳನ್ನು ಪಡೆದಿದ್ದಾರೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್ ಗಳು ಇಷ್ಟು ವಿಕೆಟ್ ಗಳಿಸಿರುವುದು ಭಾರತದಲ್ಲಿ ಇದೇ ಮೊದಲಾಗಿದೆ.
ಇದಕ್ಕೂ ಮುನ್ನ 1969ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 69 ವಿಕೆಟ್ ಪಡೆದಿದ್ದರು. 55 ವರ್ಷಗಳ ನಂತರ ಈ ಎರಡೂ ತಂಡಗಳು ಒಟ್ಟಾಗಿ ಈ ದಾಖಲೆಯನ್ನು ಮುರಿದಿವೆ. ಈಗ ಭಾರತದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್ಗಳು 70 ವಿಕೆಟ್ಗಳ ಗಡಿ ದಾಟಿದ್ದಾರೆ. ವಾಷಿಂಗ್ಟನ್ ಸುಂದರ್ ಪಾತ್ರ ಇದರಲ್ಲಿ ಹೆಚ್ಚಿದೆ. ಸುಂದರ್ ಎರಡು ಪಂದ್ಯಗಳ 4 ಇನ್ನಿಂಗ್ಸ್ ಗಳಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದವರಲ್ಲಿ ಸುಂದರ್ ನಂಬರ್ 1 ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಹೆಸರಿದ್ದು, ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಮಿಚೆಲ್ ಸ್ಯಾಂಟ್ನರ್ 13 ವಿಕೆಟ್ ಪಡೆದಿದ್ದರೆ, ಆರ್.ಅಶ್ವಿನ್ ಈ ಸರಣಿಯಲ್ಲಿ ಇದುವರೆಗೆ ಕೇವಲ 9 ವಿಕೆಟ್ ಪಡೆದಿದ್ದಾರೆ.




