64 views 0 secs 0 comments

ತಿರುಪತಿ ದೇವಸ್ಥಾನದಲ್ಲಿ ಹುಳು ಪತ್ತೆ; ಭಕ್ತರ ಆರೋಪ

In ದೇಶ
October 06, 2024

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿದೆ ಎಂಬುವುದು ಬಹಿರಂಗವಾಗುತ್ತಿದ್ದಂತೆ ಈಗ ಮತ್ತೊಂದು ಪ್ರಕರಣ ಕೇಳಿ ಬಂದಿದೆ.

ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದಾರೆ. ಆದರೆ, ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿ ಹಾಕಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಭಕ್ತರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಭಕ್ತರೊಬ್ಬರು, ನಾನು ವಾರಂಗಲ್ ನಿಂದ ತಿಮ್ಮಪ್ಪನ ದರ್ಶನಕ್ಕೆಂದು ಹೋಗಿದ್ದೆ. ಪ್ರಸಾದವಾಗಿ ವಿತರಿಸಿದ್ದ ಮೊಸರನ್ನ ಊಟ ಮಾಡುವ ಸಂದರ್ಭದಲ್ಲಿ ಊಟದಲ್ಲಿ ಹುಳು ಸಿಕ್ಕಿತ್ತು. ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದೆ. ಆದರೆ ಅವರು ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಉತ್ತರ ಕೊಟ್ಟಿದ್ದರು ಎಂದಿದ್ದಾರೆ.

ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು. ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಾವು ಊಟ ಮಾಡುವಾಗ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಭಕ್ತರು ಹೇಳಿದ್ದಾರೆ.
ಈಗಾಗಲೇ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ ಐಟಿ ರಚನೆಯಾಗಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಈ ಸುದ್ದಿ ಹಂಚಿಕೊಳ್ಳಿ