ಮುಂಬೈ ವಿರುದ್ಧ ಭರ್ಜರಿ ಗೆಲುವು; ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು!

In ಕ್ರೀಡೆ
March 13, 2024

ನವದೆಹಲಿ: ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡ 7 ವಿಕೆಟ್ ಭರ್ಜರಿ ಜಯ ಸಾಧಿಸುವುದರ ಮೂಲಕ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ.

ಬ್ಯಾಟಿಂಗ್‌ ಹಾಗೂ ಬೌಲಿಂಗ್ ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಎಲ್ಲಿಸ್ ಪೆರ್ರಿ ಆಟದಿಂದಾಗಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ ಜಯ ಸಾಧಿಸಿ ಪ್ಲೇ ಆಫ್‌ ಗೆ ಪ್ರವೇಶಿಸಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 19 ಓವರ್‌ ಗಳಲ್ಲಿ 113 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆರ್ ಸಿಬಿ 15 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 115 ರನ್‌ ಸಿಡಿಸುವ ಮೂಲಕ ತನ್ನ ಕನಸು ನನಸು ಮಾಡಿಕೊಂಡಿತು. ಟೂರ್ನಿಯಲ್ಲಿ ಇಲ್ಲಿಯವರೆಗೆ ಮುಂಬೈ ವಿರುದ್ಧ ಸತತವಾಗಿ ಸೋತಿದ್ದ ಆರ್‌ಸಿಬಿ ಈ ಪಂದ್ಯ ಗೆದ್ದು ಸಂಭ್ರಮಿಸಿದೆ.

9 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಎಲ್ಲಿಸ್‌ ಪೆರ್ರಿ ಮತ್ತು ರಿಚಾ ಘೋಷ್‌ ಮುರಿಯದ ನಾಲ್ಕನೇ ವಿಕೆಟಿಗೆ 53 ಎಸೆತಗಳಲ್ಲಿ 76 ರನ್‌ ಜೊತೆಯಾಟ ನೀಡಿ ಗೆಲುವು ತಂದು ಕೊಟ್ಟಿದ್ದಾರೆ. ಎಲ್ಲಿಸ್‌ ಪೆರ್ರಿ ಔಟಾಗದೇ 40 ರನ್‌, ರಿಚಾ ಘೋಷ್‌ ಔಟಾಗದೇ 36 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ 1 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ ಸಜಿವನ್‌ ಸಂಜನಾ ಔಟಾದ ಬೆನ್ನಲ್ಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಶೂನ್ಯಕ್ಕೆ ಬೌಲ್ಡ್‌ ಆದರು. ಮಧ್ಯಮ ಕ್ರಮಾಂಕದಲ್ಲಿ ಯಾರಿಂದಲೂ ಉತ್ತಮ ಹೋರಾಟ ಕಂಡು ಬರಲಿಲ್ಲ. ಕೊನೆಗೆ ಪ್ರಿಯಾಂಕಾ 19 ರನ್ ಸಿಡಿಸುವುದರ ಮೂಲಕ ತಂಡದ ಮೊತ್ತ 100 ರನ್‌ಗಳ ಗಡಿದಾಟಿಸಿದರು.

ಅಲ್ಲದೇ, ಇದೇ ಪಂದ್ಯದಲ್ಲಿ 6 ವಿಕೆಟ್‌ ಪಡೆಯುವ ಮೂಲಕ ಡಬ್ಲ್ಯೂಪಿಎಲ್‌ ಟೂರ್ನಿಯಲ್ಲಿ 6 ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪೆರ್ರಿ ಪಾತ್ರವಾಗಿದ್ದಾರೆ. ಪೆರ್ರಿ 15 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಅಂಕಪಟ್ಟಿಯಲ್ಲಿ ಡೆಲ್ಲಿ ಮತ್ತು ಮುಂಬೈ ತಲಾ 10 ಅಂಕ ಪಡೆದಿವೆ. ನಾಳೆ ಡೆಲ್ಲಿ ಮತ್ತು ಗುಜರಾತ್‌ ಮಧ್ಯೆ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಡೆಲ್ಲಿ ಜಯಗಳಿಸಿದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಗುಜರಾತ್‌ ಭಾರೀ ಅಂತರದಿಂದ ಗೆದ್ದರೆ ಮುಂಬೈ ಇಂಡಿಯನ್ಸ್‌ ರನ್‌ ರೇಟ್‌ ಉತ್ತಮವಾಗಿದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಮುಂಬೈ ಫೈನಲ್‌ ಪ್ರವೇಶ ಮಾಡಲಿದೆ. ಆರ್ ಸಿಬಿ ಮಾತ್ರ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಎಲಿಮಿನೇಟರ್‌ ಪಂದ್ಯವಾಡಲಿದೆ.


ಈ ಸುದ್ದಿ ಹಂಚಿಕೊಳ್ಳಿ