ಸೋಲಿನ ಪರಂಪರೆ ಮುಂದುವರೆಸಿದ ಆರ್ ಸಿಬಿ; ಗೆಲುವಿನ ಲಯಕ್ಕೆ ಮರಳಿದ ಮುಂಬೈ!

In ಕ್ರೀಡೆ
April 11, 2024

ಮುಂಬೈ: ಆರ್ ಸಿಬಿ ಸೋಲಿನ ಸರಣಿ ಮುಂದುವರೆದಿದ್ದು, ಮುಂಬೈ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ.

ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ ಗೆ ಆರ್ ಸಿಬಿ ಭಾರೀ ಮುಖಬಂಗ ಅನುಭವಿಸಿದೆ. ಇಶಾನ್‌ ಕಿಶನ್‌, ನಂತರ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಅರ್ಧಶತಕದ ಆಟದಿಂದಾಗಿ ಮುಂಬೈ ಇಂಡಿಯನ್ಸ್ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ತಂಡವು ಡುಪ್ಲೆಸಿಸ್, ರಜತಾ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಅವರ ಆರ್ಭಟದ ಪರಿಣಾಮ 196 ರನ್ ಗಳಿಸಿತ್ತು. ಈ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡ 15.3 ಓವರ್‌ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತಿರುವ ಆರ್ ಸಿಬಿ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.

ಗುರಿ ಬೆನ್ನಟ್ಟಿದ ಮುಂಬೈ ಪರ ಈಶಾನ್‌ ಕಿಶನ್‌ ಹಾಗೂ ರೋಹಿತ್‌ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ 101 ಸಿಡಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇಶಾನ್‌ ಕಿಶನ್‌ 69 ರನ್‌(34 ಎಸೆತ, 7 ಬೌಂಡರಿ, 5 ಸಿಕ್ಸ್‌), ರೋಹಿತ್‌ ಶರ್ಮಾ 38 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌) ಸಿಡಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಅಂತೂ ಆರ್ ಸಿಬಿ ಬೌಲರ್ ಗಳನ್ನು ಚಂಡಾಡಿದರು. ಕೇವಲ 19 ಎಸೆತದಲ್ಲಿ 52 ರನ್‌ (5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಔಟ್ ದರು. ಹಾರ್ದಿಕ್‌ ಪಾಂಡ್ಯ ಔಟಾಗದೇ 21 ರನ್‌, ತಿಲಕ್‌ ವರ್ಮಾ ಔಟಾಗದೇ 16 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು.

ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಗಳಿಸಿದ್ದರು. ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕಿತ್ತು ಆರ್ ಸಿಬಿಗೆ ಭಾರೀ ಹಿನ್ನಡೆ ಒದಗಿಸಿದರು.

ಈ ಸುದ್ದಿ ಹಂಚಿಕೊಳ್ಳಿ