ಅಂತು ಇಂತೂ ಗೆಲುವಿನ ನಗೆ ಬೀರಿದ ಮುಂಬೈ!

In ಕ್ರೀಡೆ
April 07, 2024

ಮುಂಬೈ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಇನ್ನೊಂದೆಡೆ ಡೆಲ್ಲಿ ಹೋರಾಡಿ ಸೋತಿದೆ.

ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 234 ರನ್‌ ಗಳಿಸಿತ್ತು. 235 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲು ಒಪ್ಪಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3.4 ಓವರ್‌ ಗಳಲ್ಲೇ ಡೇವಿಡ್‌ ವಾರ್ನರ್‌ (10 ರನ್‌) ಅವರ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 22 ಆಗಿತ್ತು. ಅಭಿಷೇಕ್‌ ಪೋರೆಲ್‌ ಹಾಗೂ ಪೃಥ್ವಿ ಶಾ ಜೋಡಿ ತಂಡಕ್ಕೆ ಚೇತರಿಕೆ ನೀಡಿತ್ತು. ಟ್ರಿಸ್ಟಾನ್ಸ್‌ ಸಬ್ಟ್‌ ಅವರ ಸ್ಫೋಟಕ ಪ್ರದರ್ಶನ ತಂಡದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. ಇನ್ನಿತರ ಆಟಗಾರರು ಸಾಥ್ ನೀಡದ ಹಿನ್ನೆಲೆಯಲ್ಲಿ ತಂಡ ಸೋಲು ಕಂಡಿತು.

ಡೆಲ್ಲಿ ಪರ ಕೊನೇವರೆಗೂ ಹೋರಾಡಿದ ಸ್ಟಬ್ಸ್‌ 71 ರನ್‌ (25 ಎಸೆತ, 7 ಸಿಕ್ಸರ್‌, 3 ಬೌಂಡರಿ), ಪೃಥ್ವಿ ಶಾ 40 ಎಸೆತಗಳಲ್ಲಿ 66 ರನ್‌ (3 ಸಿಕ್ಸರ್‌, 8 ಬೌಂಡರಿ), ಅಭಿಷೇಕ್‌ 31 ಎಸೆತಗಳಲ್ಲಿ 41 ರನ್‌ ಗಳಿಸಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ 4 ವಿಕೆಟ್‌ ಪಡೆದರೆ, ಜಸ್ಪ್ರೀತ್‌ ಬುಮ್ರಾ 2 ವಿಕೆಟ್‌ ಹಾಗೂ ಶೆಫರ್ಡ್‌ 1 ವಿಕೆಟ್‌ ಪಡೆದರು.

ಈ ಪಂದ್ಯದಲ್ಲಿ ಮುಂಬೈ ಆಟಗಾರರು ಉತ್ತಮ ಪ್ರದರ್ಶನ ತೋರಿದರು. ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ 200 ರನ್‌ಗಳ ಗಡಿ ದಾಟುವಲ್ಲಿ ಮುಂಬೈ ಯಶಸ್ವಿಯಾಯಿತು. ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ 7 ಓವರ್‌ಗಳಲ್ಲಿ 80 ರನ್‌ ಗಳಿಸಿತ್ತು. ರೋಹಿತ್‌ ಶರ್ಮಾ 49 ರನ್‌ (27 ಎಸೆತ, 3 ಸಿಕ್ಸರ್‌, 6 ಬೌಂಡರಿ), ಇಶಾನ್‌ ಕಿಶನ್‌ 42 ರನ್‌ (23 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 45 ರನ್‌ (21 ಎಸೆತ, 4 ಸಿಕ್ಸರ್‌, 2 ಬೌಂಡರಿ), ರೊಮಾರಿಯೋ ಶೆಫರ್ಡ್ ಸ್ಫೋಟಕ 39 ರನ್‌ (10 ಎಸೆತ, 4 ಸಿಕ್ಸರ್‌, 3 ಬೌಂಡರಿ) ಸಿಡಿಸಿ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್‌ ಕಿತ್ತರು, ಖಲೀಲ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

ಈ ಸುದ್ದಿ ಹಂಚಿಕೊಳ್ಳಿ