ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು!

In ರಾಜ್ಯ, ಮಂಡ್ಯ
May 07, 2024

ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಬಿರುಗಾಳಿ ಮಳೆಗೆ (Rain) ಮರವೊಂದು ಕಾರಿನ (Car) ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಡ್ಯ ನಗರದಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಮರಗಳು ಧರೆಗೆ ಉರುಳಿವೆ. ಮಂಡ್ಯ ನಗರದ ಆಸ್ಪತ್ರೆಯೊಂದರ ಹತ್ತಿರ ಮರವೊಂದು ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ತಾಲೂಕಿನ ಜಿ. ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (27) ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ಕಾರ್ತಿಕ್ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ತಂದೆಯ ಆರೋಗ್ಯ ವಿಚಾರಿಸಿ ಮರಳಿ ಬರುತ್ತಿದ್ದಾಗ ಮಳೆ ಬಂದಿದೆ. ಹೀಗಾಗಿ ತನ್ನ ಬೈಕ್ ರಸ್ತೆ ಪಕ್ಕ ನಿಲ್ಲಿಸಿ, ಸ್ನೇಹಿತರ ಕಾರು ಹತ್ತಿ ಕುಳಿತಿದ್ದಾರೆ. ಈ ವೇಳೆ ಕಾರಿನ ಮೇಲೆ ಮರ ಬಿದ್ದಿದ್ದು, ಕಾರ್ತಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ, ಈ ವೇಳೆ ಕಾರ್ತಿಕ್ ಸ್ನೇಹಿತ ಕಾರಿನ ಹೊರಗೆ ನಿಂತಿದ್ದರು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ