ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್; ಬೆಚ್ಚಿಬಿದ್ದ ಜನರು!

In ಅಪರಾಧ, ಉಡುಪಿ
June 18, 2024

ಉಡುಪಿ: ನಗರದಲ್ಲಿ ಮತ್ತೊಂದು ಗ್ಯಾಂಗ್ ವಾರ್ (Udupi Gang War) ನಡೆದಿರುವುದು ಬೆಳಕಿಗೆ ಬಂದಿದೆ. ಮೂರ್ನಾಲ್ಕು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪುತ್ತೂರಿನ ಸಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಮತ್ತು ಆತನ ಗ್ಯಾಂಗ್ ಮಾತುಕತೆಗೆಂದು ಚರಣ್ ನನ್ನು ನಗರದ ಪುತ್ತೂರಿ‌ನ ಬಿರಿಯಾನಿ ಪಾಯಿಂಟ್‌ ಬಳಿ ಕರೆದಿದೆ.

ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದಾನೆ. ಅಲ್ಲಿ ಪ್ರವೀಣ್ ಆ್ಯಂಡ್ ಟೀಂ ತಲವಾರು ಬೀಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿ ಹೋಗಿದ್ದಾರೆ. ಚರಣ್ ಸಿಗದಿದ್ದಕ್ಕೆ ಪ್ರವೀಣ್ ಮತ್ತು ಆತನ ಟೀಂ ಆತನ ಬೈಕ್ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯವನ್ನು ವಿಡಿಯೋ ಮಾಡಿ, ಹರಿಬಿಟ್ಟಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಮೂರು ಗ್ಯಾಂಗ್ ವಾರ್ ನಡೆದಿರುವ ಕುರಿತು ವರದಿಯಾಗಿದೆ. ಹೀಗಾಗಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮೇ 18 ರಂದು ಕೂಡ ಭಯಾನಕ ಗ್ಯಾಂಗ್ ವಾರ್ ನಡೆದಿತ್ತು. ಜಿಬೆಟ್ಟು ರಸ್ತೆಯಲ್ಲಿ ಮಧ್ಯರಾತ್ರಿ ಭಯಾನಕ ವಾರ್ ನಡೆದಿತ್ತು. ಗಾಂಜಾ ಅಮಲಿನಲ್ಲಿ ತಲ್ವಾರ್ ಝಳಪಿಸಿದ್ದವು. ಈಗ ಮತ್ತೆ ಅಂತಹ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.

ಈ ಸುದ್ದಿ ಹಂಚಿಕೊಳ್ಳಿ