ಕೋವಿಡ್ ಸೋಂಕು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆ; ಎಫ್ ಬಿಐ ವರದಿ

In ವಿದೇಶ
December 28, 2024
ಕೋವಿಡ್ ಸೋಂಕು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆ; ಎಫ್ ಬಿಐ ವರದಿ

ವಾಷಿಂಗ್ಟನ್‌: ಕೋವಿಡ್‌-19 ಸೋಂಕಿನ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿತ್ತು ಎಂಬ ಸಂಗತಿ ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ದಿಂದ ಹೊರ ಬಿದ್ದಿದೆ.

ಎಫ್‌ಬಿಐ ಮಾಜಿ ವಿಜ್ಞಾನಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವೈದ್ಯ ಜೇಸನ್‌ ಬನ್ನನ್‌ ತಂಡ ಕೋವಿಡ್‌-19 ಮೂಲವನ್ನು ಪತ್ತೆ ಹಚ್ಚಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಸತ್ಯಶೋಧನಾ ವರದಿಯನ್ನು ನಿರ್ಗಮನದ ಹೊಸ್ತಿಲಲ್ಲಿರುವ ಅಧ್ಯಕ್ಷ ಜೋ ಬೈಡನ್‌ ರಿಗೆ ಸಲ್ಲಿಸಲು ತನಿಖೆ ಸಂಸ್ಥೆ ಇದುವರೆಗೂ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.

ಕೋವಿಡ್‌-19 ವೈರಾಣು ಮೂಲ ಪತ್ತೆಗೆ 2021ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆದೇಶ ನೀಡಿದ್ದರು. ಹೀಗಾಗಿ ಎಫ್ ಬಿಐ ಸಂಶೋಧನೆ ಆರಂಭಿಸಿತ್ತು.

ಎಫ್‌ ಬಿಐ ನೇತೃತ್ವದಲ್ಲಿ ರಾಷ್ಟ್ರೀಯ ಗುಪ್ತಚರ ಮಂಡಳಿಯ ವಿಜ್ಞಾನಿಗಳು ಹಾಗೂ ವೈದ್ಯರು ಕೋವಿಡ್‌ ವೈರಾಣು ಮೂಲದ ಪತ್ತೆಗೆ ಅಧ್ಯಯನ ನಡೆಸಿದ್ದರು. 2021ರ ಆಗಸ್ಟ್‌ನಲ್ಲಿ ಜೋ ಬೈಡೆನ್‌ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದ ತನಿಖಾ ತಂಡ, ವೈರಾಣು ಪ್ರಾಣಿಗಳಿಂದ ಹರಡಿರುವ ಸಾಧ್ಯತೆ ತೀರ ಕಡಿಮೆ ಎಂದು ವರದಿ ನೀಡಿತ್ತು.

ತನಿಖೆ ಮುಂದುವರಿಸಿದ್ದ ಎಫ್‌ಬಿಐ ತಜ್ಞರು, ಮತ್ತಷ್ಟು ಆಳವಾದ ಅಧ್ಯಯನ ಕೈಗೊಂಡಿದ್ದರು. ಸೋಂಕಿನ ಸೂಕ್ಷ್ಮ ವಿಶ್ಲೇಷಣೆ ಮಾಡುವ ಮೂಲಕ ವೈರಾಣು ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಂಭವ ಹೆಚ್ಚು ಎಂಬ ಸಂಗತಿಯನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ