ಅತ್ತಿಗೆ ಮೇಲೆ ಕಣ್ಣು; ವಾರ್ನ್ ಮಾಡಿದ ಮೈದುನನ ಕೊಲೆ

In ಕೋಲಾರ, ರಾಜ್ಯ
October 27, 2024

ಕೋಲಾರ: ಮನೆಗೆ ಬರುತ್ತಿದ್ದ ಸ್ನೇಹಿತ ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿದ್ದಕ್ಕೆ ಕೊಲೆಯಾಗಿರುವ ಘಟನೆ ನಡೆದಿದೆ.

ನಗರದ ಜಮಾಲ್ ಷಾ ನಗರದಲ್ಲಿ ಈ ಘಟನೆ ನಡೆದಿದೆ. ರೋಹಿದ್ ಅಲಿಯಾಸ್ ಅರ್ಬಾಜ್(26) ಸಾವನ್ನಪ್ಪಿರುವ ದುರ್ದೈವಿ. ಸುಲ್ತಾನ್ ತಿಪ್ಪಸಂದ್ರದ ಅಮ್ಜಾದ್ ಎಂಬ ವ್ಯಕ್ತಿ ರೋಹಿದ್ ಅಲಿಯಾಸ್ ಅರ್ಬಾಜ್ನನ್ನು ಕೊಲೆ‌ ಮಾಡಿದ್ದಾನೆ. ರೋಹಿದ್ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಹಾಗೂ ಸ್ನೇಹಿತರೂ ಆಗಿದ್ದರು. ಹೀಗಾಗಿ ಅಮ್ಜಾದ್ ಆಗಾಗ ರೋಹಿದ್ ಮನೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ರೋಹಿದ್ ಅಣ್ಣನ ಹೆಂಡತಿ ಮೇಲೆ‌ ಕಣ್ಣು‌ ಹಾಕಿದ್ದಾನೆ. ರೋಹಿದ್ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್ ಪಡೆದು ಫೋನ್ ಮಾಡಿ ಕಿರಿಕ್ ಮಾಡಲು ಆರಂಭಿಸಿದ್ದಾನೆ. ಈ ವಿಷಯ ತಿಳಿದ ರೋಹಿದ್ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ‌ ಹಿಂದೆ ಅಮ್ಜಾದ್‌ ಮನೆ ಬಳಿ ಹೋಗಿ‌ ಗಲಾಟೆ ಮಾಡಿದ್ದರು.

ಇದಕ್ಕೂ ಸುಮ್ಮನಾಗದ ಅಮ್ಜಾದ್, ಮತ್ತೆ ಅವರ ಅತ್ತಿಗೆಗೆ ಫೋನ್ ಮಾಡಲು ಆರಂಭಿಸಿದ್ದಾನೆ. ರೋಹಿದ್ ಎದುರಲ್ಲಿಯೇ ಅವರ ಅತ್ತಿಗೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ‌ಇದನ್ನು ನೋಡಿದ್ದ ರೋಹಿದ್ ಗಲಾಟೆ ಮಾಡಿ ವಾರ್ನಿಂಗ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಅಮ್ಜಾದ್ ರೋಹಿದ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕೋಲಾರ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ