ಹಿಮಾಚಲದಲ್ಲಿ ಗ್ಯಾರಂಟಿ ವಾಪಸ್ಸು ಅಭಿಯಾನ; ರಾಜ್ಯದಲ್ಲಿ ಶುರುವಾದರೂ ಅಚ್ಚರಿ ಪಡಬೇಕಿಲ್ಲ!!

In ರಾಜ್ಯ, ರಾಜಕೀಯ
January 02, 2025
ಗುತ್ತಿಗೆದಾರನದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ!

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿಗಳ ಅಬ್ಬರ ಜೋರಾಗಿದೆ. ಈ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ವಾಪಸ್ಸು ಅಭಿಯಾನ ಆರಂಭವಾಗಿದ್ದು, ರಾಜ್ಯಕ್ಕೂ ಈ ಸ್ಥಿತಿ ಬಂದರೂ ಬರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಆರ್ಥಿಕ ಸಂಪನ್ಮೂಲ ಆಧರಿಸಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ತಾವು ನೀಡುವ ಪೊಳ್ಳು ಭರವಸೆಗಳಿಗೆ ಹಣ ಒದಗಿಸಲಾಗದೇ ಯೋಜನೆಗಳು ಹೇಗೆ ವೈಫಲ್ಯ ಸಾಧಿಸುತ್ತವೆ ಎನ್ನುವುದಕ್ಕೆ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶ ಸರ್ಕಾರ ಸಾಕ್ಷಿ ಒದಗಿಸಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಸಹ ಪಂಚ ಗ್ಯಾರಂಟಿಗಳನ್ನು ನಿರ್ವಹಿಸುವಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಲ್ಲಿ ಈಗಾಗಲೇ ನಷ್ಟವನ್ನು ಅನುಭವಿಸಿದ್ದು, ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಿಗೆ ಬಡ್ಡಿರಹಿತವಾಗಿ 2 ಸಾವಿರ ಕೋಟಿ ರೂ ಸಾಲ ನೀಡಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.
ಗೃಹ ಜ್ಯೋತಿ ಯೋಜನೆಯ ನಷ್ಟವನ್ನು ಸರಿದೂಗಿಸಲು ವಾಣಿಜ್ಯ ಹಾಗೂ ಉತ್ಪಾದಕ ವಲಯದ ಮೇಲೆ ವಿದ್ಯುತ್ ದರ ಹೆಚ್ಚಿಸಿರುವುದರ ಪರಿಣಾಮ, ಪರೋಕ್ಷವಾಗಿ ಜನ ಸಾಮಾನ್ಯರು ಇದರ ಬಿಸಿ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲಾಗದೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಉಳಿಸಿಕೊಂಡಿರುವ ಬಾಕಿ ಕಂತುಗಳನ್ನು ಪಾವತಿಸಿ ಯೋಜನೆಯನ್ನು ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಯುವನಿಧಿ ಯೋಜನೆ ಯುವ ಜನರ ಪಾಲಿಗೆ ಗಗನಕುಸುಮವಾಗಿಯೇ ಉಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಮಾಜ ಹಾಗೂ ನಾಡನ್ನು ಕಟ್ಟುವ ಮಾನವ ಸಂಪನ್ಮೂಲದ ಪ್ರಮುಖ ಭಾಗವಾಗಿರುವ ರೈತಾಪಿ ವರ್ಗ, ಶ್ರಮಿಕರು,ಯುವ ಜನರು, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಭವಿಷ್ಯಕ್ಕಾಗಿ ಯಾವುದೇ ಯೋಜನೆ ರೂಪಿಸದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಡಳಿತ ನೀಡುವ ಮೂಲಕ ತನ್ನ ಖಜಾನೆ ಬರಿದು ಮಾಡಿಕೊಂಡಿದೆ,ಇದು ನಾಡಿನ ಜನರಿಗೆ ತಿಳಿಯದ ವಿಷಯವೇನಲ್ಲ, ಏಕೆಂದರೆ ಇದರ ಪರಿಣಾಮವನ್ನು ತೆರಿಗೆದಾರರು ನಿತ್ಯ ಅನುಭವಿಸುತ್ತಲೇ ಇದ್ದಾರೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವ ಹಿಮಾಚಲದ ಕಾಂಗ್ರೆಸ್ ಸರ್ಕಾರದ ಸ್ಥಿತಿ ಕರ್ನಾಟಕಕ್ಕೆ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜನತೆಗೆ ನೀಡಿರುವ ವಚನ ಪಾಲನೆ ಹಾಗೂ ಜಾರಿಗೊಳಿಸಿರುವ ಯೋಜನೆಯನ್ನು ಸರಿದೂಗಿಸುವ ಬದ್ಧತೆ ಇದ್ದರೆ ಈ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ