ಯತೀಂದ್ರ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿಗಾಗಿ ಮನವಿ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕೆಂದು ನ್ಯಾಯವಾದಿ ವಸಂತ್ ಕುಮಾರ್ ಅವರು ರಾಜ್ಯದ ಅಡ್ವೋಕೇಟ್ ಜನರಲ್ ಅವರ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ.

“ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರದ ಮಾತುಗಳನ್ನು ಕೇಳುವ ಸ್ಥಿತಿ ತಲುಪಿವೆ” ಎಂದು ಸಿಎಂ ಅವರ ಪುತ್ರ ಹೇಳಿಕೆ ನೀಡಿದ್ದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಸಲ್ಲಿಸಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಹೆಚ್. ಡಿ. ಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ “ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದೆ. ಕೋರ್ಟ್‌ ಗಳು ಕೂಡ ಮಾತನ್ನು ಕೇಳುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಇದು ನ್ಯಾಯಾಂಗದ ಸ್ವತಂತ್ರತೆ ಪ್ರಶ್ನಿಸುವಂತಿದೆ. ನ್ಯಾಯಾಂಗವು ಕಾರ್ಯಾಂಗದ ಪ್ರಭಾವದಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಮಾಡಿದಂತಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ನ್ಯಾಯಾಂಗದ ವಿಮರ್ಶೆಯ ಸೀಮೆಯನ್ನು ಮೀರಿದ್ದು ನ್ಯಾಯಾಲಯದ ಘನತೆಗೆ ಕಳಂಕ ತರುವಂತಹದ್ದು. ನ್ಯಾಯಾಲಯದ ಘನತೆ ಮತ್ತು ಅಧಿಕಾರವನ್ನು ಎತ್ತಿ ಹಿಡಿಯುವ ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಕುಂದಿಸುವ ಯತ್ನಗಳನ್ನು ತಡೆಯವ ಅಗತ್ಯವಿದ್ದು, ಯತೀಂದ್ರ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ