ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ; ಎಚ್. ವಿಶ್ವನಾಥ್

In ಅಪರಾಧ, ಹಾಸನ
July 08, 2024

ಹಾಸನ: ಎಲ್ಲ ಪಕ್ಷಗಳೂ ಹಾಳಾಗಿ ಹೋಗಿವೆ ಎಂದು ವಿಪ ಸದಸ್ಯ ಎಚ್. ವಿಶ್ವನಾಥ್(H Vishwanath) ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಗಳಿಕೆಯಿಂದ ಎಲ್ಲ ರಾಜಯಕೀಯ ಪಕ್ಷಗಳು (Political Parties) ಹಾಳಾಗಿ ಹೋಗಿವೆ. ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾದ, ವಿವಾದ, ಪ್ರತಿವಾದ ಟೀಕೆ ಸಹಜ. ಅದು ಇಲ್ಲದೇ ಇದ್ದರೇ ಚಮಚಾಗಿರಿ ಮಾಡಿಕೊಂಡು ಕೂರಬೇಕಾಗುತ್ತದೆ. ಬೇರೆಯವರನ್ನು ಮೆಚ್ಚಿಸಲು ಸತ್ಯವಂತ ಎಂದು ಹೇಳುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟ ವ್ಯಕ್ತಿಯನ್ನು ಭ್ರಷ್ಟ ಎಂದೇ ಹೇಳಬೇಕು. ವಿಶ್ವನಾಥ್ ಎಲ್ಲರ ಬಗ್ಗೆನು ಮಾತಾಡ್ತಾರೆ ಅಂತಾರೆ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇಲ್ಲದೇ ಬರೀ ಹೊಗಳಿಕೆ ಇದ್ದರೆ ಹೇಗೆ? ಎಲ್ಲಾ ರಾಜಕೀಯ ಪಕ್ಷಗಳು ಹೊಗಳಿಕೆಯಿಂದಲೇ ಹಾಳಾಗಿ ಹೋಗಿವೆ. ಒಂದು ಪಕ್ಷದ ಕಾರ್ಯಕರ್ತರು ನಾಯಕ ಏನೇ ತಪ್ಪು ಮಾಡಿದರೂ ಅವನನ್ನು ಹೊಗಳುತ್ತಾರೆ. ಹಾಗಾಗಿ ಇವತ್ತು ಪಕ್ಷ ರಾಜಕಾರಣ ಹಾಳಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಹೊಗಳುವಿಕೆಯಿಂದ ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹೀಗೆ ವ್ಯಕ್ಯಿ ರಾಜಕಾರಣ ಶುರುವಾಗಿದೆ. ದೇಶದಲ್ಲೇ ಈಗ ಪಕ್ಷ ರಾಜಕಾರಣ ಇಲ್ಲದಂತಾಗಿದೆ. ಹೀಗಾಗಿ ನಾನು ಆ ತಪ್ಪು ನಾನು ಮಾಡೋಕೆ ಹೋಗಲ್ಲ. ಮತ್ತೊಬ್ಬನನ್ನು ಟೀಕೆ ಮಾಡಬೇಕಾದರೆ ಮೊದಲು ನಾನು ಸರಿ ಇರಬೇಕು. ಇದನ್ನೇ ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ