25 views 0 secs 0 comments

ಮಹಾ ಸಿಎಂ ಯಾರೇ ಆದರೂ ಸ್ವಾಗತಿಸುತ್ತೇವೆ; ಹಂಗಾಮಿ ಸಿಎಂ ಶಿಂಧೆ

In ದೇಶ, ರಾಜಕೀಯ
November 27, 2024

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯ ಗಳಿಸಿದೆ. ಆದರೆ, ಇದುವರೆಗೂ ಸಿಎಂ ಅಭ್ಯರ್ಥಿ ಯಾರು ಎಂಬುವುದು ಮಾತ್ರ ಸ್ಪಷ್ಟವಾಗಿಲ್ಲ. ಈ ಮಧ್ಯೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್ಲ ನಿರ್ಧಾರವನ್ನು ಬಿಜೆಪಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವು ಇಲ್ಲಿಯವರೆಗೂ ಹಲವಾರು ಕಾರ್ಯಗಳನ್ನು ಮಾಡಿದ್ದೇವೆ. ಜನಪ್ರಿಯತೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಜನರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸವೇ ನಮಗೆ ಜನಪ್ರಿಯತೆ ತಂದಿತು. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ನಿರ್ಧಾರವನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟಿದ್ದೇವೆ. ಅವರು ಏನೇ ನಿರ್ಧಾರ ಕೈಗೊಂಡರೂ ನಾವು ಅದಕ್ಕೆ ಬದ್ಧ ಎಂದಿದ್ದಾರೆ.

ನಾನೆಂದೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಜನಸಾಮಾನ್ಯನಂತೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದೇನೆ ಎಂಬ ತೃಪ್ತಿಯಿದೆ. ಈ ಬಾರಿಯ ಗೆಲುವು ಜನರ ಗೆಲುವು. ನಮ್ಮ ಸರ್ಕಾರಕ್ಕೆ ನೀಡಿದ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ನಾನು ಎರಡೂವರೆ ವರ್ಷದ ಆಡಳಿತದ ಬಗ್ಗೆ ತೃಪ್ತಿ ಹೊಂದಿದ್ದೇನೆ. ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರದ ಗೆಲುವಿಗೆ ನಮ್ಮ ಬೆನ್ನೆಲುಬಾಗಿ ನಿಂತಿದ್ದು ಬಿಜೆಪಿ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಾನು ಬದ್ಧ ಎಂದಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ